ರಂಗಸ್ಥಳ
ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನ ಒಂದು ಗ್ರಾಮ. ಚಿಕ್ಕಬಳ್ಳಾಪುರದಿಂದ ಗೌರಿಬಿದನೂರಿಗೆ ಹೋಗುವ ಮಾರ್ಗದಲ್ಲಿ, ಚಿಕ್ಕಬಳ್ಳಾಪುರಕ್ಕೆ ಸು. 5 ಕಿಮೀ ದೂರದಲ್ಲಿರುವ ತಿಪ್ಪೆನಹಳ್ಳಿಯಿಂದ ಬೋದಗನಹಳ್ಳಿಗೆ ಹೋಗುವ ಮಾರ್ಗದಲ್ಲಿ, ತಿಪ್ಪೇನಹಳ್ಳಿಗೆ ಸು, 5 ಕಿಮೀ, ದೂರದಲ್ಲಿರುವ ಶ್ರೀರಂಗನಾಥಸ್ವಾಮಿಯ ಬೃಹತ್ ದೇಗುಲವಿರುವ ಗ್ರಾಮ.

	ಇಲ್ಲಿರುವ ಶ್ರೀರಂಗನಾಥಸ್ವಾಮಿಯ ದೇವಾಲಯ ವಾಸ್ತುಶಿಲ್ಪದ ದೃಷ್ಟಿಯಿಂದ ವಿಜಯನಗರದ ಕಾಲಕ್ಕೆ ಸೇರುವಂಥದ್ದು. ದೇವಾಲಯದ ಮಹಾದ್ವಾರ ದಕ್ಷಿಣಾಭಿಮುಖವಾಗಿದ್ದು, ಸುಕನಸಿ, ನವರಂಗ, ಸುಂದರವಾದ ಮುಖಮಂಟಪಗಳನ್ನೂ ಹೊಂದಿದೆ. ಮುಖಮಂಟಪದ ಸುತ್ತಲೂ ಸುಂದರ ಕೆತ್ತನೆಯಿಂದ ಕೂಡಿದ 14 ಶಿಲಾಸ್ತಂಭಗಳನ್ನೊಳಗೊಂಡ ಹಜಾರವಿದೆ. ನವರಂಗದಲ್ಲಿ ಶ್ರೀವೈಷ್ಣವ ಆಚಾರ್ಯರುಗಳಾದ ವಿಶ್ವಕ್ಸೇನ, ರಾಮಾನಜ, ನಮ್ಮಾಳ್ವಾರ್, ಮತ್ತು ಚಕ್ರತ್ತಾಳ್ಬವಾರ್‍ಗಳ ಲೋಹದ ಪ್ರತಿಮೆಗಳಿವೆ. ದೇವಾಲಯದಲ್ಲಿ ಶಯನಮುದ್ರೆಯಲ್ಲಿರುವ ಶ್ರೀರಂಗನಾಥಸ್ವಾಮಿಯ ಸುಂದರ ಮೂರ್ತಿ ಸು. 1.2192 ಮೀ ಎತ್ತರವಿದೆ. ಪ್ರಾಕಾರದೊಳಗೆ ಧ್ವಜಸ್ತಂಭದ ಪೂರ್ವಕ್ಕೆ ಶ್ರೀಲಕ್ಷ್ಮೀದೇವಿ ಹಾಗೂ ಆಂಡಾಳದೇವಿಯರ ಆಲಯಗಳಿವೆ. ದೇವಾಲಯದ ಪ್ರಾಕಾರದ ಹೊರಗೆ ಪೂರ್ವದಿಕ್ಕಿನಲ್ಲಿ ಶಂಖ ಮತ್ತು ಚಕ್ರ ತೀರ್ಥಗಳಿವೆ. ದೇವಾಲಯದ ಪಶ್ಚಿಮಕ್ಕಿರುವ ಬೆಟ್ಟಗಳ ಸಾಲನ್ನು ಜ್ವಾಲಾ ನರಸಿಂಹ ಸ್ವಾಮಿ ಬೆಟ್ಟವೆಂದು ಕರೆಯುತ್ತಾರೆ.

	ಶ್ರೀರಂಗನಾಥಸ್ವಾಮಿ ದೇವಾಲಯವನ್ನು ಚಾಮರಾಜ ಒಡೆಯರು ಪರಕಾಲ ಮಠಾಧೀಶರ ಅಭೀಷ್ಟದಂತೆ ಜೀರ್ಣೋದ್ಧಾರಗೊಳಿಸಿದಂತೆ ತಿಳಿದುಬರುತ್ತದೆ. ಇಲ್ಲಿ ನಡೆಯುವ ಉತ್ಸವಗಳಲ್ಲಿ ಮಾರ್ಗಶಿರ ಶುದ್ಧ ಪೂರ್ಣಿಮೆಯೆಂದು ನಡೆಯುವ ಬ್ರಹ್ಮೋತ್ಸವ, ಮುಕ್ಕೋಟಿ ಏಕಾದಶಿ, ದಸರ ವಿಶೇಷ ಸೇವೆ ಮತ್ತು ಶ್ರೀರಾಮ ನವಮಿ ಉತ್ಸವಗಳು ಮುಖ್ಯವಾದವು.

	ಇಲ್ಲಿ ಅನೇಕ ಶಾಸನಗಳು ದೊರೆತಿವೆ. ಸು. 12ನೆಯ ಶತಮಾನದ ವೈಷ್ಣವ ಗುರು ಪರಾಶರಭಟ್ಟರು ಶ್ರೀರಂಗನಾಥನನ್ನು ಕುರಿತು ಶ್ರೀರಂಗರಾಜಸ್ತವ ಎಂಬ ಸಂಸ್ಕøತ ಕಾವ್ಯ ರಚಿಸಿದಂತೆ ತಿಳಿದುಬರುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ